ಮುಖಪುಟ :: ‘ಇತ್ತುಗಳ ಧ್ವಜ'ವನ್ನು ಇನ್ನೆಷ್ಟು ದಿನ ಎತ್ತಿ ಹಿಡಿಯುವುದು?

‘ಇತ್ತುಗಳ ಧ್ವಜ'ವನ್ನು ಇನ್ನೆಷ್ಟು ದಿನ ಎತ್ತಿ ಹಿಡಿಯುವುದು?


01 November 2008

ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆ. ಹಲವು ದಶಕಗಳ ಹೋರಾಟಕ್ಕೆ, ಚಳವಳಿಗೆ ನ್ಯಾಯ ದೊರಕಿದೆ. ಕನ್ನಡ ಭಾಷೆಯ ಹಿರಿಮೆಯನ್ನು ದೇಶ ಮಾನ್ಯ ಮಾಡುವುದೆಂದರೆ, ಕನ್ನಡದ ಬದುಕು, ಸಂಸ್ಕೃತಿಯನ್ನು ಎತ್ತಿ ಹಿಡಿದಂತೆ. ಒಂದು ಭಾಷೆಯ ಪ್ರಾಚೀನತೆಯನ್ನು ಒಪ್ಪಿಕೊಳ್ಳುವುದೆಂದರೆ, ಆ ಭಾಷೆಯ ಮೂಲಕ ಬದುಕಿದ ಸಮುದಾಯದ ಜನರ ಪ್ರಾಚೀನತೆಯನ್ನು ಒಪ್ಪಿಕೊಂಡಂತೆ. ಕನ್ನಡಿಗರಿಗೆ ನಿಜಕ್ಕೂ ಇದು ಹೆಮ್ಮೆಯ ಕ್ಷಣ. ಈ ನಾಡು ನುಡಿಯನ್ನು ಕಟ್ಟಿದ ಮಹನೀಯರಿಗೆ ಈ ಕ್ಷಣ ಅರ್ಪಣೆಯಾಗಬೇಕು. ಹರಿದು ಹಂಚಿಹೋಗಿದ್ದ ಕನ್ನಡವನ್ನು ಏಕೀಕರಣಗೊಳಿಸಿ, ಆಧುನಿಕತೆಗೆ ಪೂರಕವಾಗಿ ಕನ್ನಡವನ್ನು ಬೆಳೆಸಿದ ಮಹನೀಯರೇ ಕನ್ನಡದ ಶಾಸ್ತ್ರೀಯ ಸ್ಥಾನಮಾನಕ್ಕೆ ಅಡಿಗಲ್ಲು ಹಾಕಿದವರು. ಇಂದು ಶಾಸ್ತ್ರೀಯ ಸ್ಥಾನಮಾನ ತಮ್ಮಿಂದ ದೊರಕಿದೆ ಎಂದು ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಎದೆ ತಟ್ಟಿಕೊಳ್ಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಎಂಶ್ರೀ, ತೀನಂಶ್ರೀ, ಶಂಬಾಜೋಷಿ, ಹುಯಿಲಗೋಳ, ಕುವೆಂಪು... ಹೀಗೆ ಆಧುನಿಕ ಕನ್ನಡವನ್ನು ಕಟ್ಟಿ ನಿಲ್ಲಿಸಿದ ಮಹನೀಯರನ್ನು ಸ್ಮರಿಸಬೇಕೆಂದು ಇರರಾಗಿಗೂ ಅನ್ನಿಸುತ್ತಿಲ್ಲ. ಕನ್ನಡದಲ್ಲಿ ಒಟು ಎಷ್ಟು ಅಕ್ಷರಗಳಿವೆ ಎಂದೇ ತಿಳಿದಿರದ ರಾಜಕಾರಣಿಗಳು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ತಂದುಕೊಟ್ಟವರು ತಾವು ಎಂದು ಹೇಳಿಕೊಂಡರೆ, ಅದಕ್ಕಿಂತ ಹಾಸ್ಯಾಸ್ಪದವಾದುದು ಇನ್ನೇನಿದೆ?

ಶಾಸ್ತ್ರೀಯ ಸ್ಥಾನಮಾನ ಮೇಲ್ನೋಟಕ್ಕೆ ಗೌರವ. ಆದರೆ ಆಸ್ಥಾನಮಾನ ನಮ್ಮ ಪಾಲಿಗೆ ಒಂದು ‘ಹೊರೆ'ಯೂ ಕೂಡ ಎನ್ನುವ ಅಂಶವನ್ನು ನಾವು ಮರೆಯಬಾರದು. ಶಾಸ್ತ್ರೀಯ ಸ್ಥಾನಮಾನವನ್ನು ತನ್ನದಾಗಿಸುವ ಮೂಲಕ, ಹಿಡಿತನದ ಜವಾಬ್ದಾರಿ ಕನ್ನಡದ ಹೆಗಲಿಗೆ ಬಿದ್ದಿದೆ. ಒಂದು ಮನೆಯಲ್ಲಿ ಒಬ್ಬಾತನನ್ನು ‘ಹಿರಿಯ' ಎಂದು ಗುರುತಿಸಿದ ಮೇಲೆ ಆತ ಒಂದಿಷ್ಟು ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಮುಖ್ಯವಾಗಿ ಇತರರಿಗೆ ಮಾದರಿಯಾಗಿ ಬದುಕಬೇಕಾಗುತ್ತದೆ. ಇಡೀ ಮನೆಯನ್ನು ಸಂಕಷ್ಟದ ಸಮಯದಲ್ಲಿ ಮುನ್ನಡೆಸುವ ಮುತ್ಸದ್ದಿತನವೂ ಆತನಲ್ಲಿರಬೇಕಾಗುತ್ತದೆ. ಕರ್ನಾಟಕಕ್ಕೆ ದೇಶ ಹಿರಿಯನ ಜವಾಬ್ದಾರಿಯನ್ನು ವಹಿಸಿದೆ. ಆ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ನಾವೆಷ್ಟು ಸಿದ್ಧರಾಗಿ ನಿಂತಿದ್ದೇವೆ ಎನ್ನುವುದರ ಕುರಿತಂತೆ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಚಿಂತನೆ ನಡೆಸಬೇಕಾಗಿದೆ.

ಕನ್ನಡ ಭಾಷೆಗೆ ಸಹಸ್ರ ವರ್ಷಗಳ ಇತಿಹಾಸವಿದೆ ಎನ್ನುವುದೇನೋ ಸರಿ. ಆದರೆ ‘ಇತ್ತುಗಳ ಧ್ವಜವನ್ನು ಹಿಡಿದೆತ್ತಿ' ನಾವು ಈ ದೇಶದಲ್ಲಿ ನಮ್ಮ ಹೆಗ್ಗಳಿಕೆಯನ್ನು ಎಲ್ಲಿಯವರೆಗೆ ಸಾಬೀತು ಪಡಿಸಬಹುದು? ‘ಒಂದಾನೊಂದು ಕಾಲದಲ್ಲಿ ನನ್ನಜ್ಜನಿಗೊಂದು ಆನೆಯಿತ್ತು' ಎಂದು ಹೇಳಿಕೊಳ್ಳುವ ಬಡವಿಯ ಕತೆಯಂತೆ ಇದು. ನಮ್ಮ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ ನಿಜ. ಆದರೆ ಇಂದು ಹೇಗಿದೆ? ಆಧುನಿಕ ಜಗತ್ತಿನಲ್ಲಿ ಕನ್ನಡ ಎಷ್ಟರ ಮಟ್ಟಿಗೆ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ? ಸಹಸ್ರಾರು ವರ್ಷಗಳ ಇತಿಹಾಸವಿರುವ ಭಾಷೆಯನ್ನು ನಾವೆಷ್ಟು ಉಳಿಸಿದ್ದೇವೆ, ಬೆಳೆಸಿದ್ದೇವೆ? ಈ ಪ್ರಶ್ನೆಗಳು ಮಹತ್ವವನ್ನು ಪಡೆಯಬೇಕಾಗಿದೆ. ಸರಕಾರ ಶಾಸ್ತ್ರೀಯ ಸ್ಥಾನಮಾನ ನೀಡಿದಾಕ್ಷಣ ಕನ್ನಡ ಒಮ್ಮಿಂದೊಮ್ಮೆಗೆ ಆಕಾಶಕ್ಕೆ ನೆಗೆದು ಬಿಡುವುದಿಲ್ಲ. ಅಂತಿಮವಾಗಿ ಆ ಭಾಷೆಯ ಉದ್ದಾರ ಆ ಭಾಷೆಯ ಜೊತೆಗೆ ಬದುಕುವ ಜನ ಸಮುದಾಯದ ಕೈಯಲ್ಲೇ ಇದೆ. ಜನರ ದಿನ ನಿತ್ಯದ ಬಳಕೆಯಲ್ಲಿ ಎಷ್ಟರ ಮಟ್ಟಿಗೆ ಕನ್ನಡ ಪರಿಣಾಮಕಾರಿಯಾಗಿದೆ ಎನ್ನುವುದರಿಂದ ನಾವು ಕನ್ನಡದ ಮಹತ್ವವನ್ನು ಗ್ರಹಿಸಬಹುದಾಗಿದೆ. ಸಂಸ್ಕೃತವನ್ನು ದೇಶಭಾಷೆ ಎಂದು ಕರೆಯುತ್ತೇವೆ. ಆದರೆ ಜನಸಾಮಾನ್ಯರ ಉಪಯೋಗಕ್ಕಿಲ್ಲದ ಈ ಭಾಷೆಯನ್ನು ‘ಸತ್ತ ಭಾಷೆ' ಎಂದು ದೈನಂದಿನ ಬದುಕಿನಲ್ಲಿ ಎಂದು ಒಪ್ಪಿಕೊಂಡಿದ್ದೇವೆ. ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಕರೆದು, ಅದನ್ನು ತಿಜೋರಿಯೊಳಗೆ ಭದ್ರವಾಗಿಟ್ಟು ಗೌರವಿಸಿದರೆ ಏನು ಬಂತು ಪ್ರಯೋಜನ? ಕನ್ನಡ ಜನಸಾಮಾನ್ಯರ ಬದುಕಿನಲ್ಲಿ ಇನ್ನಷ್ಟು ಬೆರೆಯಬೇಕು. ಆಧುನಿಕ ಜಗತ್ತಿನಲ್ಲಿ ಅನ್ಯವಾಗಿ ಉಳಿಯದೆ, ಹೊಸ ಪೀಳಿಗೆಯೊಂದಿಗೆ ಸಂಹವನ ಸಾಸಲು ಯಶಸ್ವಿಯಾಗಬೇಕು. ಇದು ಸಾಧ್ಯವಾಗದೆ ಇದ್ದರೆ ಯಾವ ಸ್ಥಾನಮಾನವೂ ಕನ್ನಡವನ್ನು ಉಳಿಸಲಾರದು.

ಕನ್ನಡದ ಶಾಸ್ತ್ರೀಯ ಸ್ಥಾನಮಾನ ಚಳವಳಿ ತೀವ್ರತೆಯನ್ನು ಪಡೆದಿರುವುದು, ತಮಿಳು ಭಾಷೆಗೆ ಸಿಕ್ಕಿದ ಸ್ಥಾನಮಾನ ಸಿಕ್ಕಿದ ಬಳಿಕ. ಒಂದನ್ನು ಕನ್ನಡಿಗರಾದ ನಾವು ಮರೆಯಬಾರದು. ತಮಿಳು ಬಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಲಿ, ದೊರಕದಿರಲಿ ಅದು ಇಂದು ಜಾಗತಿಕವಾUಗಿ ಬೇರೆ ಬೇರೆ ಕಾರಣಗಳ ಮೂಲಕ ಗುರುತಿಸಲ್ಪಡುತ್ತಿದೆ. ತಮಿಳುನಾಡು ತನ್ನ ಭಾಷೆಯ ಶಕ್ತಿಯಿಂದಲೇ ಕೇಂದ್ರವನ್ನು ನಿಯಂತ್ರಿಸುತ್ತಿದೆ. ಸಿನೆಮಾ, ಸಂಗೀತಗಳ ಮೂಲಕ ಜಗತ್ತನ್ನು ತಲುಪುವ ಪ್ರಯತ್ನವನ್ನು ತಮಿಳುನಾಡು ಮಾಡಿದೆ. ವಿಶ್ವ ಬಾಷೆಯಾಗಿ ಗುರುತಿಸಿಕೊಳ್ಳುವ ಹಂತದಲ್ಲಿದೆ ತಮಿಳು ಭಾಷೆ. ಮಾಹಿತಿ ತಂತ್ರಜ್ಞಾನದಲ್ಲಿ ತಮಿಳು ಭಾಷೆಯ ಬಳಕೆಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಗೂಗಲ್‌ನಲ್ಲೂ ತಮಿಳು ಭಾಷೆಯ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು. ಆದರೆ ಐಟಿಯಲ್ಲಿ ಮಹತ್ಸಾಧನೆಯನ್ನು ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಒಂದು ಉತ್ತಮ ತಂತ್ರಜ್ಞಾನವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆಧುನಿಕತೆಯೊಂದಿಗೆ ಸಂವಾದಿಯಾಗಲು ಸಾಧ್ಯವಾಗುವ ಭಾಷೆ ಬೆಳೆಯುವುದು, ಉಳಿಯುವುದು ಹೇಗೆ ಸಾಧ್ಯ?

ಕನ್ನಡಕ್ಕೆ ದೊರಕಿದ ಶಾಸ್ತ್ರೀಯ ಸ್ಥಾನಮಾನಕ್ಕೆ ಹೆಮ್ಮೆಪಡುತ್ತಲೇ ಈ ಎಲ್ಲ ಅಂಶಗಳ ಕುರಿತಂತೆ ನಾವು ಯೋಚಿಸಬೇಕಾಗಿದೆ. ‘ಇತ್ತು'ಗಳ ಧ್ವಜವನ್ನು ಹಿಡಿದೆತ್ತಿ ನಿಂತುದು ಸಾಕು. ನಮ್ಮ ಕೈಯಲ್ಲಿ ಈಗ ಇರುವುದೆಷ್ಟು, ಮುಂದೆ ಉಳಿಯುವುದೆಷ್ಟು, ಕಳೆದು ಹೋದುದನ್ನು ಮತ್ತೆ ಪಡೆಯುವ ದಾರಿ ಯಾವುದು? ಇವೆಲ್ಲವುಗಳ ಕುರಿತಂತೆ ಯೋಚಿಸುವುದಕ್ಕೆ ಇದು ಸರಿಯಾದ ಸಮಯ.