ಮುಖಪುಟ :: ವರ ಕೊಟ್ಟವನನ್ನೇ ಸುಡ ಹೊರಟವರು

ವರ ಕೊಟ್ಟವನನ್ನೇ ಸುಡ ಹೊರಟವರು


25 October 2008

ಮಾಲೆಗಾಂವ್ ಮತ್ತು ಗುಜರಾತ್‌ನ ಮೋಡಸ್‌ಗಳಲ್ಲಿ ಸಂಭವಿಸಿದ ಬಾಂಬ್ ಸ್ಪೊಟಗಳಲ್ಲಿ ಮತ್ತೊಮ್ಮೆ ಸಂಘಪರಿವಾರದ ಕೈವಾಡ ಬಹಿರಂಗವಾಗುವ ಮೂಲಕ, ದೇಶದಲ್ಲಿ ಭಯೋತ್ಪಾದನೆ, ಉಗ್ರವಾದಗಳು ಸಂಸ್ಕೃತಿ ಯ ರೂಪವನ್ನು ಪಡೆದುಕೊಳ್ಳುತ್ತಿವೆ. ಸಂಘಪರಿವಾರ ಈ ದೇಶದ ಸಂಸ್ಕೃತಿಯ ವಕ್ತಾರ, ಸಂಸ್ಕೃತಿಯ ಕಾವಲುಗಾರನೆಂದ ಮೇಲೆ, ಅದು ನಡೆಸಿದ ಸ್ಪೋಟ, ಭಯೋತ್ಪಾದನೆ, ಹಿಂಸೆಗಳನ್ನು ಅಕೃತವಾಗಿ ಸಂಸ್ಕೃತಿ ಚಟುವಟಿಕೆ ಎಂದು ಈ ದೇಶ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಇತ್ತೀಚೆಗೆ ನಡೆದ ಮಾಲೆಗಾಂವ್ - ಮೋಡಸ್ ಸ್ಪೊಟಗಳಲ್ಲಿ ಸಂಘಪರಿವಾರ ಭಾಗಿಯಾಗಿರುವುದನ್ನು ಪೊಲೀಸರು ಘೋಷಿಸಿದ ಬಳಿಕವೂ, ಸರಕರಾವು ಬಜರಂಗ ದಳದಂತಹ ಸಂಘಟನೆಗಳನ್ನು ನಿಷೇಸಲು ಹಿಂದೇಟು ಹಾಕುತ್ತಿದೆಯೆಂದಾದರೆ, ಭಯೋತ್ಪಾದನೆಯನ್ನು ಸಂಸ್ಕೃತಿಯ ಒಂದು ಭಾಗವಾಗಿ ಒಪ್ಪಿಕೊಳ್ಳದೇ ನಮಗೆ ಬೇರೆ ದಾರಿಯೇನಿದೆ?

ದೇಶದಲ್ಲಿ ಸಂಭವಿಸಿದ ವಿವಿಧ ಸ್ಪೋಟಗಳಲ್ಲಿ ಸಂಘಪರಿವಾರ ಭಾಗವಹಿಸಿರುವ ಅಂಶ ಬೆಳಕಿಗೆ ಬಂದಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಮಾಲೆಗಾಂವ್, ಕಾನ್ಪುರ ಮೊದಲಾದೆಡೆ  ನಡೆದ ಸ್ಪೊಟಗಳ ಹಿಂದೆ ಸಂಘಪರಿವಾರದ ಕೈವಾಡವಿರುವುದು ಬೆಳಕಿಗೆ ಬಂದಿತ್ತು. ಆದರೆ ಕಾನೂನು ವ್ಯವಸ್ಥೆ ಮತ್ತು ಮಾಧ್ಯಮಗಳೆಂಬ ಕರಟಕ-ದಮನಕಗಳು ಒಂದಾಗಿ ಅದನ್ನು ಮುಚ್ಚಿ ಹಾಕಿದ್ದವು. ಕೇರಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌ಗಳಲ್ಲಿ ಸಂಘ ಪರಿವಾರದ ವಿವಿಧ ಘಟಕಗಳು ತಮ್ಮ ಕಚೇರಿಗಳನ್ನು ಈಗಾಗಲೇ ಸ್ಪೋಟಕ ತಯಾರಿಯ ಕಾರ್ಖಾನೆಗಳನ್ನಾಗಿ ಮಾಡಿಕೊಂಡಿವೆ. ಆ ಕುರಿತಂತೆ ಕಾನೂನು ಕಣ್ಣು ಮುಚ್ಚಿ  ಕೂರುವ ಮೂಲಕ, ದೇಶವನ್ನೇ ಕತ್ತಲಲ್ಲಿಡುವ ಪ್ರಯತ್ನ ಮಾಡಿತು. ಕಣ್ಣು ಮುಚ್ಚಿದ ಕ್ಷಣ ಎಲ್ಲವೂ ಕತ್ತಲಲ್ಲಿ ಮುಚ್ಚಿ ಹೋಗುವುದಿಲ್ಲ ಎನ್ನುವುದು ನಮ್ಮ ಕಾನೂನಿಗೆ ತಡವಾಗಿ ತಿಳಿದಿದೆ. ಮಾಲೆಗಾಂವ್-ಮೋಡಸ್‌ನಲ್ಲಿ  ನಡೆದ ಸ್ಪೋಟವನ್ನು ಎಲ್ಲ  ಸ್ಪೋಟಗಳಂತೆಯೇ ಲಷ್ಕರ್, ಇಂಡಿಯನ್ ಮುಜಾಹಿದೀನ್, ಸಿಮಿಗಳ ತಲೆಗೆ ಕಟ್ಟಲು ಮಾಡಿದ ಮಾಧ್ಯಮಗಳ ಪ್ರಯತ್ನವೂ ವಿಫಲವಾಯಿತು. ಸತ್ಯವೆನ್ನುವ ಬೆಕ್ಕು ಸುಳ್ಳಿನ ಚೀಲವನ್ನು ಹರಿದು ಹೊರ ನೆಗೆದಿದೆ.

ಹಾಗೆ ನೋಡಿದರೆ, ಮಾಲೆಗಾಂವ್ ಸ್ಪೋಟವೊಂದನ್ನೇ ಮುಂದಿಟ್ಟು ನಾವು ಆಕಾಶ-ಭೂಮಿ ಒಂದು ಮಾಡುವುದು, ಕೇಸರಿ ಭಯೋತ್ಪಾದನೆ ಎಂದು ಗದ್ದಲ ಎಬ್ಬಿಸುವುದು ಪರೋಕ್ಷವಾಗಿ ಸಂಘಪರಿವಾರದ ಉಳಿದೆಲ್ಲಾ ಕೃತ್ಯಗಳಿಗೆ ಮಾಫಿ ನೀಡಿದಂತೆ. ಈ ದೇಶದಲ್ಲಿ ಯಾವುದೇ ಭಯೋತ್ಪಾದಕ ಸಂಘಟನೆ ಮಾಡದಷ್ಟು ಹಿಂಸೆ, ಸಾವು ನೋವುಗಳು ಸಂಘಪರಿವಾರ ಸಂಘಟನೆಗಳಿಂದ ಸಂಭವಿಸಿವೆ. ಗುಜರಾತ್‌ನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದ ಮುಂದೆ ಯಾವುದೇ ಭಯೋತ್ಪಾದನಾ ಹಿಂಸೆಯನ್ನೂ ಹೋಲಿಸುವುದಕ್ಕೆ ಸಾಧ್ಯವೇ? ರಥಯಾತ್ರೆಯ ಸಂದರ್ಭ ಸಂಭವಿವಿಸಿದ ಕೋಮು ಗಲಭೆ, ಬಾಬರಿ ಮಸೀದಿ ಧ್ವಂಸಗೊಂಡಾಗ ಸಂಭವಿಸಿದ ಕೋಮು ಗಲಭೆ, ಮುಂಬೈ ಗಲಭೆ ಇವೆಲ್ಲವುಗಳ ಮುಂದೆ ಭಯೋತ್ಪಾದಕರು ಇನ್ನೂ ಎಳೆ ಶಿಶುಗಳು. ಈ ದೇಶಕ್ಕೆ ಭಯೋತ್ಪಾದಕ ಸಂಘಟನೆಗಳಿಗಿಂತ ಹೆಚ್ಚು  ಹಾನಿ ಮಾಡಿರುವುದು ಸಂಘಪರಿವಾgದ ಸಂಘಟನೆಗಳು.

ಭಯೋತ್ಪಾದನೆ ಮತ್ತು ಕೋಮುವಾದದ ನಡುವೆ ಇರುವ ವ್ಯತ್ಯಾಸ ಸಣ್ಣದು. ಭಯೋತ್ಪಾದನೆ ಸಣ್ಣ ಪ್ರಮಾಣದಲ್ಲಿ ದೇಶಕ್ಕೆ ಹಾನಿ ಮಾಡಿದ್ದರೆ, ಕೋಮುವಾದದ ಹೆಸರಿನಲ್ಲಿ ಸಂಘಪರಿವಾರ ಈ ದೇಶಕ್ಕೆ ಭಾರೀ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿದೆ. ಎರಡರ ಉದ್ದೇಶವೂ ದೇಶವನ್ನು ಒಡೆಯುವುದು. ಹಿಂದೂ ಮುಸ್ಲಿಮರ ನಡುವೆ ಬಿರುಕು ಸೃಷ್ಟಿಸುವುದು. ಆದರೆ, ಸಂಘಪರಿವಾರಕ್ಕೆ ಹೋಲಿಸಿದರೆ, ಭಯೋತ್ಪಾದಕ ಸಂಘಟನೆಗಳು ಹೆಚ್ಚು ಸಹ್ಯ. ಯಾಕೆಂದರೆ ಅವುಗಳು ತಾವು ಮಾಡಿದ ಕೃತ್ಯವನ್ನು ಅಕೃತವಾಗಿ ಘೋಷಿಸುತ್ತವೆ. ತಾವು ಮಾಡಿದ ಕೃತ್ಯವನ್ನು ಇತರರ ತಲೆಗೆ ಕಟ್ಟಿ ಸುಬಗನಾಗುವ ಪ್ರಯತ್ನ ನಡೆಸುವುದಿಲ್ಲ. ಆದರೆ ಮಾಲೆಗಾಂವ್ ಸ್ಪೋಟದ ವಿವಗಳನ್ನು ಗಮನಿಸಿ. ಕೇಸರಿ ಭಯೋತ್ಪಾದಕರು ಸ್ಪೋಟವನ್ನೇನೋ ನಡೆಸಿದರು. ಸ್ಪೋಟದ ಸಂದರ್ಭದಲ್ಲಿ ಬಳಸಿದ ಬೈಕನ್ನು ಸಿಮಿ ಕಚೇರಿಯ ಮುಂದೆ ನಿಲ್ಲಿಸಿದರು. ಬೈಕ್‌ನ ಮೇಲೆ ಸಿಮಿ ಲಾಂಛನಗಳನ್ನು ಹಾಕಿದರು. ಇಡೀ ಕೃತ್ಯವನ್ನು ಈ ಮೂಲಕ ಸಿಮಿ ಸಂಘಟನೆ ನಡೆಸಿದೆ ಎಂದು ಬಿಂಬಿಸುವುದಕ್ಕೆ ಪ್ರಯತ್ನಿಸಿ ವಿಫಲರಾದರು. ಅಂದರೆ ಅವರ ಉದ್ದೇಶ ಸ್ಪೋಟ ಮಾತ್ರವಾಗಿರಲಿಲ್ಲ. ಆ ಸ್ಪೋಟದ ನಂತರದ ಪರಿಣಾಮಗಳು ಅವರಿಗೆ ಮುಖ್ಯವಾಗಿದ್ದವು. ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟುವುದು ಅವರ ಉದ್ದೇಶವಾಗಿತ್ತು. ಈ ಮೂಲಕ ಸಂಘಪರಿವಾರ ದೇಶದ ಪಾಲಿನ ಅತ್ಯಂತ ಅಪಾಯಕಾರಿ ಭಯೋತ್ಪಾದಕ ಸಂಘಟನೆಯಾಗಿ ಗುರುತಿಸಲ್ಪಟ್ಟಿದೆ.

ಬಜರಂಗದಳದಂತಹ ಸಂಘಟನೆಗಳನ್ನು ನಿಷೇಸಲು ಸರಕಾರ ಇನ್ನೂ ಹಿಂದೇಟು ಹಾಕಿದರೆ, ಮುಂದಿನ ದಿನಗಳಲ್ಲಿ ಹಿಂಸೆ, ಭಯೋತ್ಪಾದನೆ ಸಂಸ್ಕೃತಿ, ದೇಶಪ್ರೇಮದ ಹೆಸರಿನಲ್ಲಿ ನಮ್ಮ ನಡುವೆ ಓಡಾಡಲಿವೆ. ಸರಕಾರ ಮತ್ತು ಕಾನೂನು ವ್ಯವಸ್ಥೆಯ ವರದಿಂದ ಸೃಷ್ಟಿಯಾಗಿರುವ ಭಸ್ಮಾಸುರ ಸಂಘಪರಿವಾರ. ಈಗ ತನಗೆ ವರ ನೀಡಿದ ಕಾನೂನು, ಸರಕಾರ, ದೇಶವನ್ನು ಸುಟ್ಟು ಹಾಕಲು ಹೊರಟಿದೆ. ಅದನ್ನು ನಿಯಂತ್ರಿಸದಿದ್ದರೆ, ಅದು ತನ್ನನ್ನೇ ಭಸ್ಮ ಮಾಡಲಿದೆ ಎನ್ನುವ ಸತ್ಯವನ್ನು ದೇಶ ಅರಿತುಕೊಳ್ಳಬೇಕು.