ಮುಖಪುಟ :: ಮೈಸೂರು ದಸರಾ ಜನರ ಉತ್ಸವವಾಗಲಿ

ಮೈಸೂರು ದಸರಾ ಜನರ ಉತ್ಸವವಾಗಲಿ


11 October 2008

  ಎಂದಿನಂತೆ ಮಾಧ್ಯಮಗಳ ಸವಕಲು ವರ್ಣನೆ, ರಾಜಕಾರಣಿಗಳ ಘೋಷಣೆ, ವೈದಿಕರ ಘೋಷಣೆ, ಒಡಿಯರ್ ‘ರಾಜ ಪ್ರಭುತ್ವ'ದ ದಾಸ್ಯಾರಾಧನೆಯೊಂದಿಗೆ ಮೈಸೂರು ದಸರಾ ಮುಗಿದಿದೆ. ಜಂಬೂ ಸವಾರಿಯ ವೈಭವದೊಂದಿಗೆ ನವರಾತ್ರಿಯ ಸಂಭ್ರಮಕ್ಕೆ ತೆರೆ ಬಿದ್ದಿದೆ. ಬಿಜೆಪಿ ಸರಕಾರ ಈ ಬಾರಿಯ ದಸರಾ ಕುರಿತಂತೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತಾದರೂ, ಆ ನಿರೀಕ್ಷೆಗಳ ಫಲ ಕೊಡಲಿಲ್ಲ. ಮೈಸೂರು ದಸರಾವನ್ನು ಹೈಜಾಕ್ ಮಾಡುವ ಸಂಘಪರಿವಾರದ ಹುನ್ನಾರ, ರಾಜಕೀಯ ಮೇಲಾಟ, ಲಿಂಗಾಯತ ಸ್ವಾಮೀಜಿಯ ಕುರಿತಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆ ಇತ್ಯಾದಿಗಳೇ ಈ ಬಾರಿಯ ದಸರಾ ವಿಶೇಷಗಳು.

ಎರಡು ಕಾರಣಗಳಿಗಾಗಿ ಮೈಸೂರು ದಸರಾ ಮಹತ್ವವನ್ನು ಪಡೆಯುತ್ತದೆ. ಒಂದು ದಸರಾ ವೈಭವಕ್ಕಾಗಿ ಸರಕಾರ ನಮ್ಮ ಕೋಟಿಗಟ್ಟಳೆ ಹಣವನ್ನು ವ್ಯಯ ಮಾಡುತ್ತದೆ. ಇನ್ನೊಂದು, ದಸರಾ ನೆಪದಲ್ಲಿ ಪ್ರವಾಸೋದ್ಯಮವನ್ನು ಬೆಳೆಸುವ, ಮೈಸೂರಿನತ್ತ ಜಗತ್ತನ್ನು ಸೆಳೆಯುವ ಅವಕಾಶ ನಾಡಿಗೆ ಒದಗಿ ಬರುತ್ತದೆ. ಕೋಟಿಗಟ್ಟಳೆ ಹಣವನ್ನು ಚೆಲ್ಲಿ, ಜಗತ್ತಿನ ಗಮನವನ್ನು ತನ್ನತ್ತ ಸೆಳೆಯುವ ಸಂದರ್ಭದಲ್ಲಿ ನಾಡಿಗೆ ತನ್ನದೇ ಆದ ಹೊಣೆಗಾರಿಕೆಯಿರುತ್ತದೆ. ಮುಖ್ಯವಾಗಿ ಅದು ಈ ನಾಡಿನ ಬಹುಸಂಸ್ಕೃತಿಯನ್ನು, ವೈವಿಧ್ಯವನ್ನು ದಸರಾದ ಮೂಲಕ ತೆರೆದಿಡಬೇಕು. ಸೌಹಾರ್ದ ಪರಂಪರೆ, ಹೋರಾಟ, ತ್ಯಾಗ, ಬಲಿದಾನ ಇತ್ಯಾದಿಗಳಿಂದ ಮೈತಳೆದು ನಿಂತ ಅಖಂಡ ಕರ್ನಾಟಕವನ್ನು ಜಗತ್ತಿಗೆ ತೆರೆದುಕೊಡಬೇಕು. ಹಾಗಾದಾಗ ಮಾತ್ರ ಅದು ನಿಜವಾದ ಅರ್ಥದಲ್ಲಿ ನಾಡಹಬ್ಬವಾಗುತ್ತದೆ. ಆದರೆ ದಸರಾದಲ್ಲಿ ಅಂತಹುದು ನಡೆಯುತ್ತಿದೆಯೇ?

ದಸರಾ ಎಂದರೆ ಜಂಬೂ ಸವಾರಿ ಎನ್ನುವಂತಹ ಒಂದು ಅಭಿಪ್ರಾಯ ನಮ್ಮಲ್ಲಿದೆ. ಒಂದು ರೀತಿಯಲ್ಲಿ ಇದು ರಾಜಪ್ರಭುತ್ವದ ಆರಾಧನೆ, ಬ್ರಿಟಿಷರ ಕೈಗೊಂಬೆಗಳಾಗಿ ಈ ನಾಡನ್ನು ಅನುಭವಿಸಿದವರ ಪಳೆಯುಳಿಕೆಗಳನ್ನು ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಿ ಕೃತಾರ್ಥರಾಗುವುದು ನಾಡಹಬ್ಬ ಹೇಗಾದೀತು? ಜಂಬೂ ಸವಾರಿಯೂ ಸೇರಿದಂತೆ, ದಸರಾ ಸಂದರ್ಭದಲ್ಲಿ ಅರಮನೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮ ಈ ನಾಡಿನ ಜನಸಾಮಾನ್ಯರನ್ನು ಪ್ರತಿನಿಸುವುದಿಲ್ಲ. ಮತ್ತೆ ತಲೆಮಾರಿನ ದಿರಿಸು ಧರಿಸಿ ಅರಮನೆಯ ಸಿಂಹಾಸನದಲ್ಲಿ ವಿರಾಜಮಾನರಾಗಿ ಪೂಜೆ ನೆರವೇರಿಸುವುದು, ಜನಸಾಮಾನ್ಯರು ಅವರಿಗೆ ಉಘೇ ಹೇಳುವುದು, ಆನೆಗಳ ಮೇಲೇರಿ ಕಾವಾಡಿಗಳಿಂದ ಸೇವೆ ಮಾಡಿಸಿಕೊಳ್ಳುವುದು ಇತ್ಯಾದಿಗಳು ರಾಜಪ್ರಭುತ್ವವನ್ನು ವೈಭವೀಕರಿಸುವ ಸಂಕೇತವಾಗಿದೆ. ಯಾವಾಗ ಕರ್ನಾಟಕ ರಾಜಪ್ರಭುತ್ವದಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಕಾಲಿಟ್ಟಿತೋ ಆ ದಿನ ನಾಡಿಗೆ ಹಬ್ಬದ ದಿನ. ದೇಶ ಸ್ವತಂತ್ರವಾದಾಗ ಮೈಸೂರು ಅರಸರು ಪಟ್ಟ ಬಿಟ್ಟುಕೊಡಲು ಹಿಂದೇಟು ಹಾಕಿದ್ದರು ಎನ್ನುವ ಅಂಶವನ್ನು ಉಲ್ಲೇಖಿಸಬೇಕಾಗಿದೆ. ಒಡೆಯರ್ ವಂಶದ ಕೊನೆಯ ಕುಡಿಯಾಗಿರುವ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈಸೂರು ಅರಮನೆಯ ಆಸ್ತಿಗೆ ಸಂಬಂಸಿದಂತೆ ತನಗೆ ಸೇರಬೇಕು ಎಂದು ವಾದಿಸುವವರು. ಪ್ರಜಾಸತ್ತೆಗೆ ಸಡ್ಡು ಹೊಡೆದವರನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ, ಉಘೇ ಎಂದು ಹೇಳುವ ಮೂಲಕ ನಾವು ಜಗತ್ತಿಗೆ ಯಾವ ಸಂದೇಶವನ್ನು ನೀಡುತ್ತಿದ್ದೇವೆ? ಮೈಸೂರು ಅರಮನೆ ಈ ನಾಡಿನ ಜನತೆಗೆ ಸೇರಿದುದು. ಮೈಸೂರು ಒಡೆಯರು ಉತ್ತು, ಬಿತ್ತಿ ಆ ಅರಮನೆಯನ್ನು ಕಟ್ಟಿಲ್ಲ. ಜನರ ತೆರಿಗೆಯ ಹಣದಿಂದ ನಾಡನ್ನು ಆಳುವ ಉದ್ದೇಶಕ್ಕಾಗಿ ಅರಮನೆಯನ್ನು ಕಟ್ಟಿದ್ದರು. ನಾವು ದಸರಾದ ಹೆಸರಿನಲ್ಲಿ ರಾಜಪ್ರಭುತ್ವವನ್ನು ವೈಭವೀಕರಿಸಿದರೆ, ಅದು ನಾಡನ್ನು ಹಿಂದಕ್ಕೆ ಒಯ್ಯಬಹುದೇ ಹೊರತು, ಮುಂದಕ್ಕಲ್ಲ.

zಸರಾದ ಹೆಸರಿನಲ್ಲಿ ರಾಜಪ್ರಭುತ್ವದ ಬಳಿಕ, ಎತ್ತಿ ಹಿಡಿಯಲ್ಪಡುತ್ತಿರುವುದು ವೈದಿಕ, ಪುರೋಹಿತಶಾಹಿ ವ್ಯವಸ್ಥೆ. ಈ ಕುರಿತಂತೆ ಎರಡು ವರ್ಷಗಳ ಹಿಂದೆ ದಸರಾವನ್ನು ಉದ್ಘಾಟನೆ ಮಾಡಿದ ಚಿಂತಕ ಬರಗೂರು ರಾಮಚಂದ್ರಪ್ಪ  ಹೇಳಿದ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ದಸರಾದಲ್ಲಿ ಚಾಮುಂಡೇಶ್ವರಿಗೆ ಕಾಯಿ ಒಡೆದು ಪೂಜೆ ಸಲ್ಲಿಸುವ ಸಂಪ್ರದಾಯವನ್ನು ವಿರೋಸಿದ ಅವರು, ದಸರಾದ ಹೆಸರಿನಲ್ಲಿ ಹಿಂಸೆಯ ಮೌಲ್ಯವನ್ನು ಎತ್ತಿ ಹಿಡಿಯಬಾರದು ಎಂದು ಕರೆ ನೀಡಿದ್ದರು. ಮಹಿಷಾಸುರನ ಕಗ್ಗೊಲೆಯನ್ನು ಸಮರ್ಥಿಸಿ, ಅದನ್ನು ವೈಭವೀಕರಿಸುವ ಆಚರಣೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ. ಸಮಾಜಕ್ಕೆ ಇಂದು ಬೇಕಾಗಿರುವುದು ಸೌಹಾರ್ದ, ಶಾಂತಿಯ ಸಂದೇಶ ಎನ್ನುವುದನ್ನು ಅವರು ಪ್ರಸ್ತಾಪಿಸಿದ್ದರು. ದಸರಾದ ಹೆಸರಿನಲ್ಲಿ ನಡೆಯುತ್ತಿರುವ ವೈದಿಕ ರಾಜಕಾರಣ ಈ ಬಾರಿಯೂ ಪ್ರಚಾರವನ್ನು ಪಡೆಯಿತು. ಕಳೆದ ಬಾರಿ ಒಕ್ಕಲಿಗ ಮುಖ್ಯಮಂತ್ರಿ ಕರೆದರೆನ್ನುವ ಕಾರಣಕ್ಕಾಗಿ ಲಿಂಗಾಯತ ಸ್ವಾಮೀಜಿಗಳು ದಸರಾ ಉದ್ಘಾಟನೆಯನ್ನು ನಿರಾಕರಿಸಿದರು. ಬಳಿಕ ಒಕ್ಕಲಿಗ ಸ್ವಾಮೀಜಿಯೇ ದಸರಾದ ನೇತೃತ್ವವನ್ನು ವಹಿಸಬೇಕಾಯಿತು. ಈ ಬಾರಿ ಲಿಂಗಾಯತ ಮುಖ್ಯಮಂತ್ರಿ - ಲಿಂಗಾಯತ ಸ್ವಾಮೀಜಿ ದಸರಾದಲ್ಲಿ ಒಂದಾದರು. ಇದನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿ ವಿವಾದವನ್ನು ಮೈಮೇಲೆಳೆದುಕೊಂಡರು.

ಈ ಬಾರಿಯ ಇನ್ನೊಂದು ಅಪಾಯ, ದಸರಾದಲ್ಲಿ ಸಂಘಪರಿವಾರ ತನ್ನ ಪ್ರಾಬಲ್ಯವನ್ನು ಹೆಚ್ಚು ಮೆರೆದಿರುವುದು, ಜಮ್ಮು-ಕಾಶ್ಮೀರದಲ್ಲಿ ಹಿಂಸೆಯ ಕೋಡಿಯನ್ನು ಹರಿಸಿದ ಅಮರನಾಥ ಕ್ಷೇತ್ರದ ಪ್ರಾತ್ಯಕ್ಷಿಕೆಯನ್ನು ದಸರಾದಲ್ಲಿ ಇಡುವ ಮೂಲಕ ದಸರಾವನ್ನು ಒಂದು ರಾಜಕೀಯ ಉತ್ಸವವಾಗಿಸಲು ಪ್ರಯತ್ನಿಸಿತು. ವೇದಿಕೆಗಳಲ್ಲಿ ಎಲ್ಲ ಪಕ್ಷಗಳ ಮುಖಂಡರು ಪ್ರಾಮುಖ್ಯವನ್ನು ಪಡೆಯಬೇಕಾಗಿತ್ತು. ಆದರೆ ಬಿಜೆಪಿಯ ಕೆಲವು ನಾಯಕರೇ ನಾಡಿನ ಪ್ರತಿನಿಗಳಾಗಿ ಮಿಂಚಿದರು. ಒಂದು ರೀತಿಯಲ್ಲಿ ದಸರಾ ನಾಡಹಬ್ಬವಾಗುವ ಬದಲು, ಬಿಜೆಪಿಯ ಹಬ್ಬವಾಯಿತು.

ದಸರಾದ ಗದ್ದಲ, ಅಬ್ಬರ, ವೈಭವದ ನಡುವೆ ಕಾವಾಡಿ ಜನರ ಅಕ್ರಂದನ ನಮ್ಮ ಕಿವಿಗೆ ಕೇಳಿಸದಾಯಿತು. ದಸರಾದಲ್ಲಿ ಮಹತ್ವದ ಪಾತ್ರವನ್ನು ವಹಿಸುವುದೇ ಆನೆಗಳು. ಈ ಆನೆಗಳು ನೋಡಿಕೊಳ್ಳುತ್ತಿರುವ ಕಾವಾಡಿಗಳು ಅಥವಾ ಮಾವುತರು ತಮ್ಮ ಹಕ್ಕಿಗಾಗಿ ಈ ಬಾರಿಯೂ ಧ್ವನಿಯೆತ್ತಿದ್ದು, ಅದು ಅರಣ್ಯ ರೋದನವಾಯಿತು. ಸಕ್ಕರೆಬೈಲಿನಲ್ಲಿ ಆನೆಗಳಿಗೆ ತರಬೇಡಿ ನೀಡುವ, ಅವುಗಳನ್ನು ಕಾಯುವ ಈ ಕಾವಾಡಿUರ ಹಲವು ತಿಂಗಳ ವೇತನ ಪಾವತಿಯಾಗಿಲ್ಲ. ಅವರಿಗೆ ಸಿಗಬೇಕಾದ ಸವಲತ್ತು ಸಿಕ್ಕಿಲ್ಲ. ಪ್ರತಿ ದಸರಾ ಸಂದರ್ಭದಲ್ಲಿ ಸರಕಾರ ಇವರಿಗೆ ಭರವಸೆಗಳನ್ನು ಉಡುಗೊರೆಯಾಗಿ ನೀಡುತ್ತಾ ಬರುತ್ತಿವೆ. ಆದರೆ ಅವರ ಬದುಕನ್ನು ದಸರಾ ಎಳ್ಳಷ್ಟೂ ಬದಲಿಸಿಲ್ಲ. ನಾವು ಆನೆಗಳ ಮೇಲೆ ರಾಜ ವೈಭವದಿಂದ ಮೆರೆದ ಒಡೆಯರ್ ವಂಶದ ಕುಡಿಯನ್ನು ನೋಡಿ ಆನಂದಿಸಿದೆವು. ದಸರಾವನ್ನು ವರ್ಣಿಸಿದೆವು. ಆದರೆ, ಕರ್ನಾಟಕದ ನಿಜವಾದ ದೊರೆ ಕೈಯಲ್ಲಿ ಅಂಕುಶವನ್ನು ಹಿಡಿದು, ಈ ಆನೆಯ ಕಾವಲು ಕಾಯುತ್ತ ನಡೆಯುತ್ತಿದ್ದ. ಅವನೆಡೆಗೆ ಒಂದು ಕ್ಷಣ ನಾವು ಮತ್ತು ನಮ್ಮ ಸರಕಾರ ದೃಷ್ಟಿ ಹಾಯಿಸಿದ್ದರೆ ಈ ಬಾರಿಯ ದಸರಾ ಸಾರ್ಥಕವಾಗುತ್ತಿತ್ತು.