ಮುಖಪುಟ :: ಭಟ್ಕಳದಲ್ಲಿ ಬಾಂಬ್ ಹೋಲುವ ವಸ್ತು ಪತ್ತೆ: ಬೆಚ್ಚಿಬಿದ್ದ ಜನತೆ

ಭಟ್ಕಳದಲ್ಲಿ ಬಾಂಬ್ ಹೋಲುವ ವಸ್ತು ಪತ್ತೆ: ಬೆಚ್ಚಿಬಿದ್ದ ಜನತೆ


01 November 2008

31-bkl-02.jpg

ಭಟ್ಕಳ, ಅ.೩೧: ಕರ್ನಾಟಕ ರಾಜ್ಯೋತ್ಸವ ಆಚರಣೆಯ ಮುನ್ನ ದಿನವಾದ ಶುಕ್ರವಾರ ಭಟ್ಕಳದಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆದಿದ್ದು ಇಲ್ಲಿನ ಮೌಲಾನ ಅಝಾದ್ ರಸ್ತೆಯಲ್ಲಿರುವ ಕಳಿ ಹನುಮಂತ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಯಾರೋ ಕಿಡಿಗೇಡಿಗಳು ಬಾಂಬ್‌ನ್ನು ಹೋಲುವಂತಹ ವಸ್ತುವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿಟ್ಟ ಪರಿಣಾವಾಗಿ ಮಧ್ಯಾಹ್ನದ ವರೆಗೂ ಇಲ್ಲಿನ ಜನರಲ್ಲಿ ಭಯ ಹಾಗೂ ಆತಂಕವು ಮನೆಮಾಡಿಕೊಂಡಿತ್ತು.

ಇಂದು ಬೆಳಗ್ಗೆ ೮:೩೦ಕ್ಕೆ ಚಿಕ್ಕ ಬಾಕ್ಸ್ ಒಂದರಲ್ಲಿ ಬಾಂಬ್ ಆಕಾರದ ವಸ್ತುವೊಂದು ಸಿಕ್ಕಿದ್ದು ಅದನ್ನು ತಕ,ಣವೇ ಇಲ್ಲಿನ ನಗರ ಠಾಣಾ ಪೊಲೀಸರು ಡಿವೈಎಸ್‌ಪಿ ವೇದಮೂರ್ತಿಯವರ ಮಾರ್ಗದರ್ಶನದಲ್ಲಿ ಠಾಣೆಗೆ ಕೊಂಡೊಯ್ದು ಅಲ್ಲಿ ಮರಳಿನ ಚೀಲಗಳಿಂದ ಸುತ್ತುವರಿದು ಅದನ್ನು ಸುರಕ್ಷಿತವಾಗಿಟ್ಟದ್ದು ನಂತರ ಮಧ್ಯಾಹ್ನದ ವೇಳೆಗೆ ಕಾರವಾರದಿಂದ ಬಂದ ಬಾಂಬ್ ಶೋಧಕ ದಳ ಹಾಗೂ ಶ್ವಾನ ದಳದವರು ಬಿಡಿಸಿ ನೋಡಿದಾಗ ಅದರಲ್ಲಿ ರೇಡಿಯೋಗೆ ಬಳಸುವ ಸರ್ಕ್ಯೂಟ್, ರೇಡಿಯೋ ವ್ಯಾಲ್ಯೂಮ್ ಕಂಟ್ರೋಲರ್, ಒಂದು ಸಣ್ಣ ಬ್ಯಾಟರಿ, ಪ್ಲಾಸ್ಟಿಕ್ ಸುತ್ತಿದ್ದ ಎರಡು ತಂತಿ ಹಾಗೂ ಇಂಗ್ಲಿ,ಷ್ ಅಕ್ಷರ ಇ ಅನ್ನು ಹೋಲುವ ೧೨ ಲೋಹದ ವಸ್ತುಗಳು ದೊರಕಿದೆ. ಬಳಿಕ "ಇದು ಬಾಂಬ್ ಅಲ್ಲ. ಬಾಂಬ್ ಆಕಾರದ ವಸ್ತು' ಎಂದು ಪೊಲೀಸರು ದೃಢೀಕರಿಸಿದ ಅನಂತರವೇ ಯಾರೋ ಕಿಡಿಗೇಡಿಗಳು ಮಾಡಿದ ಕೀಟಲೆ ಎಂದು ಗೊತ್ತಾಯಿತು.

ಸಮುದಾಯವೊಂದರ ಮೇಲೆ ಗೂಬೆ ಕೂರಿಸುವ ವಿಫಲ ಯತ್ನ?

ಭಟ್ಕಳದಲ್ಲಿ ಈಗ ಶಾಂತಿ ನೆಲೆಸಿದ್ದು ಕಿಡಿಗೇಡಿಗಳಿಂದ ಇಲ್ಲಿ ಅಶಾಂತಿಯನ್ನು ಹರಡುವಂತಹ ಕಾರ್ಯ ಬಹಳ ವ್ಯವಸ್ಥಿತವಾಗಿ ಜರಗುತ್ತಿದೆ. ಈ ಕಿಡಿಗೇಡಿಗಳಿಂದ ಕಡಿವಾಣವೆಂಬುದು ಇಲ್ಲವೆ ಎಂದು ಇಲ್ಲಿ ಬುದ್ಧಿವಂತ ಜನರ ಪ್ರಶ್ನೆಯಾಗಿದೆ. ರಮಝಾನ ತಿಂಗಳಿನಲ್ಲಿ ಇಲ್ಲಿ ಭಯವನ್ನುಂಟು ಮಾಡಲು ಹಿಂದು ಸೇನೆಯ ಹೆಸೆರಿನಲ್ಲಿ ದಾಳಿ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದ ಜನರು ಈಗ ಇಲ್ಲಿ ದೇವಸ್ಥಾನದ ಬಳಿ ಬಾಂಬ್ ಹೋಲುವಂತಹ ವಸ್ತುವೊಂದನ್ನು ಇಟ್ಟು ಒಂದು ಸಮುದಾಯದ ಮೇಲೆ ಸಂಶಯವನ್ನು ಮೂಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಇಲ್ಲಿನ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.