ಮುಖಪುಟ :: ಹೊಸ ಯೋಜನೆಗೆ ಹಣವಿಲ್ಲ: ಸಿಎಂ

ಹೊಸ ಯೋಜನೆಗೆ ಹಣವಿಲ್ಲ: ಸಿಎಂ


07 September 2008

ಬೆಂಗಳೂರು, ಸೆ.೬: ರಾಜ್ಯದ ಖಜಾನೆಯಲ್ಲಿ ಹಣದ ಕೊರತೆ ಇದೆ ಎಂಬುದನ್ನು ಇಂದು ಕೂಡಾ ಪುನರುಚ್ಚರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಮೊದಲು ಘೋಷಿಸಲಾಗಿರುವ ಕಾರ್ಯಕ್ರಮಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದ ತನ್ನ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ದಾವಣಗೆರೆಯಲ್ಲಿ ತಾನು ನೀಡಿದ ಹೇಳಿಕೆ ವಿಷಯಾಧಾರಿತವಾಗಿತ್ತು. ಪತ್ರಿಕೆಗಳಲ್ಲಿ ವರದಿಯಾಗಿರುವುದು ಸರಿಯಾಗಿದೆ. ಈಗಿನ ಸಂದರ್ಭದಲ್ಲಿ ಹೊಸ ಯೋಜನೆಗಳನ್ನು ಕೈಗೊಳ್ಳಲು ಬೊಕ್ಕಸದಲ್ಲಿ ಹಣವಿಲ್ಲ. ಈ ಮೊದಲು ಬಜೆಟ್‌ನಲ್ಲಿ ಪ್ರಕಟಿಲಾಗಿರುವ ಮತ್ತು ಕಳೆದ ವರ್ಷದಿಂದ ಪ್ರಗತಿಯಲ್ಲಿರುವ ಯೋಜನೆಗಳಿಗೆ ಹಣಕಾಸು ಲಭ್ಯವಿದೆ ಎಂದು ಹೇಳಿದರು.

ಸರಕಾರ ಅಸ್ತಿತ್ವಕ್ಕೆ ಬಂದ ನಂತರದಿಂದ ಹಲವು ಕಾರ್ಯಕ್ರಮಗಳಿಗೆ ಸಾಕಷ್ಟು ಹಣ ನೀಡಿದ್ದೇನೆ. ಹೊಸ ಕಾರ್ಯಕ್ರಮಗಳನ್ನು ಘೋಷಿಸುವ ಸ್ಥಿತಿಯಲ್ಲಿ ತನ್ನ ಸರಕಾರ ಇಲ್ಲ. ಈ ವರ್ಷದ ಹಣಕಾಸು ನಿರ್ವಹಣೆ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಸ್ಥಿತಿ ಚೇತರಿಸಿಕೊಂಡ ನಂತರ ಹೊಸ ಕಾರ್ಯಕ್ರಮಗಳ ಬಗ್ಗೆ ಚಿಂತನೆ ನಡೆಸುವುದಾಗಿ ಯಡಿಯೂರಪ್ಪ ನುಡಿದರು.