ಮುಖಪುಟ :: ಮೊಳಗಿದ ಕನ್ನಡ ಡಿಂಡಿಮ: ಶಾಸ್ತ್ರೀಯ ಸ್ಥಾನಮಾನ ಘೋಷಣೆ

ಮೊಳಗಿದ ಕನ್ನಡ ಡಿಂಡಿಮ: ಶಾಸ್ತ್ರೀಯ ಸ್ಥಾನಮಾನ ಘೋಷಣೆ


01 November 2008

08oct31kpn58-front.jpg

ಹೊಸದಿಲ್ಲಿ, ಅ.೩೧: ಕನ್ನಡದ ಹಲವು ದಶಕಗಳ ಕನಸು ನನಸಾಗಿದೆ. ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಣೆಗೆ ನಿರ್ಧರಿಸಲಾಗಿದೆ. ಕನ್ನಡ ಜನತೆಯ ಪಾಲಿಗೆ ಇದು ರಾಜ್ಯೋತ್ಸವದ ಕೊಡುಗೆಯಾಗಿದೆ.

ಕನ್ನಡ ಹಾಗೂ ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ನ.೧ರಂದು ಕನ್ನಡ ರಾಜ್ಯೋತ್ಸವ ಹಾಗೂ ಆಂಧ್ರಪ್ರದೇಶ ರಾಜ್ಯ ರಚನೆಯ ದಿನಾಚರಣೆಗಳನ್ನು ಕನ್ನಡ ಹಾಗೂ ತೆಲುಗುಗಳನ್ನು ಶಾಸ್ತ್ರೀಯ ಭಾಷೆಗಳೆಂದು ಘೋಷಿಸಲು ಸರಕಾರ ನಿರ್ಧರಿಸಿದೆಯೆಂದು ಕೇಂದ್ರ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಇಂದಿಲ್ಲಿ ತಿಳಿಸಿದರು.

ಉಭಯ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ಆಗ್ರಹಿಸಿ ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಿಂದ ಹಲವು ರಾಜಕೀಯ ಹಾಗೂ ನಾಗರಿಕ ನಿಯೋಗಗಳು ದಿಲ್ಲಿಗೆ ಹೋಗಿದ್ದವು.

ಈ ವಿಷಯವನ್ನು ನಿರ್ಧರಿಸುವುದಕ್ಕಾಗಿ ಸಂಸ್ಕೃತಿ ಸಚಿವಾಲಯವು ಭಾಷಾ ಪರಿಣತರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯ ಶಿಫಾರಸಿನಂತೆ ಕನ್ನಡ ಹಾಗೂ ತೆಲುಗುಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ನಿರ್ಧರಿಸಲಾಯಿತೆಂದು ಸೋನಿ ತಿಳಿಸಿದರು.

ಸುದೀರ್ಘ ಹೋರಾಟ

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನದ ಗೌರವ ಬಹು ಹಿಂದೆಯೇ ಸಿಗಬೇಕಿತ್ತಾದರೂ ಹಲವು ರಾಜಕೀಯ ಕಾರಣಗಳಿಂದ ಈ ಕಾರ್ಯ ವಿಳಂಬವಾದುದು ಇದೀಗ ಇತಿಹಾಸ.

ರಾಜ್ಯಾದ್ಯಂತ ಸಂಭ್ರಮ

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿರುವುದಕ್ಕೆ ರಾಜ್ಯಾದ್ಯಂತ ಸಂಭ್ರಮ ವ್ಯಕ್ತವಾಗಿದೆ. ನಾಡಿನ ಗಣ್ಯ ಸಾಹಿತಿಗಳು, ಹೋರಾಟಗಾರರು ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.