ಮುಖಪುಟ :: ಕೂಲಿ ಕೆಲಸ ಮಾಡುವವನಿಗೆ ಭಯೋತ್ಪಾದಕರ ನಂಟು ಹೇಗೆ ಸಾಧ್ಯ?

ಕೂಲಿ ಕೆಲಸ ಮಾಡುವವನಿಗೆ ಭಯೋತ್ಪಾದಕರ ನಂಟು ಹೇಗೆ ಸಾಧ್ಯ?


25 October 2008

ಬಂಧಿತ ಬೋಳಂತೂರು ರಫೀಕ್‌ನ ಮನೆಯವರ ಅಸಹಾಯಕ ಪ್ರಶ್ನೆ

ಮಂಗಳೂರು, ಅ.೨೪: ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಅ.೧೪ರಂದು ಪೊಲೀಸರು ವಶಕ್ಕೆ ತೆಗೆದುಕೊಂಡ ಬಂಟ್ವಾಳ ತಾಲೂಕಿನ ಬೋಳಂತೂರು ರಫೀಕ್‌ರ ಕುಟುಂಬವು ಪೊಲೀಸರು ಒಡ್ಡಿರುವ ಬೆದರಿಕೆಯಿಂದಾಗಿ ಭಯದ ವಾತವರಣದಲ್ಲಿ ಬದುಕುತ್ತಿದ್ದು, ರಫೀಕ್ ಹೇಗಿದ್ದಾನೆ, ಎಲ್ಲಿದ್ದಾನೆ ಎಂದು ಸಂಬಂಧಪಟ್ಟವರಲ್ಲಿ ವಿಚಾರಿಸುವ ಗೋಜಿಗೂ ಅವರು ಹೋಗಿಲ್ಲ.

ಕೂಲಿ ಕೆಲಸ ಮಾಡಿ ಬದುಕುವ ರಫೀಕ್‌ಗೆ ಭಯೋತ್ಪಾದಕರ ನಂಟು ಇರಲು ಸಾಧ್ಯವೇ ಇಲ್ಲ ಎಂಬುದು ಅವರ ಕುಟುಂಬ ಸದಸ್ಯರ ಒಕ್ಕೊರಲ ಅಭಿಪ್ರಾಯ. ರಫೀಕ್‌ನನ್ನು ಪೊಲೀಸರು ಹುಡುಕಿಕೊಂಡು ಹೋದಾಗಲೂ ಅವನು ಸಕಲೇಶಪುರದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೊಟ್ಟೆ ಹೊರೆಯಲು ಕಷ್ಟ ಪಡುತ್ತಿದ್ದ ವ್ಯಕ್ತಿಗೆ ಭಯೋತ್ಪಾದಕನ ಪಟ್ಟ ಕಟ್ಟಿದ ಪೊಲೀಸರು, ಇನ್ನು ಅವನನ್ನು ವಶಕ್ಕೆ ತೆಗೆದುಕೊಂಡು ಎಂತಹ ಕಷ್ಟ ಕೊಟ್ಟಿರಬಹುದು ಎಂಬುದನ್ನು ಊಹಿಸಲೂ ನಮಗೆ ಸಾಧ್ಯವಾಗುತ್ತಿಲ್ಲ. ಅವನ ಬಗ್ಗೆ ತಿಳಿಯೋಣವೆಂದರೆ ನಮ್ಮನ್ನೂ ಪೊಲೀಸರೂ ಎಲ್ಲಿ ಸಿಕ್ಕಿಸಿಬಿಡುತ್ತಾರೋ ಎಂಬ ಭಯ ಕಾಡುತ್ತಿದೆ ಎಂದು ರಫೀಕ್‌ರ ಸೋದರಲ್ಲೊಬ್ಬರು ಹೇಳುತ್ತಾರೆ.